ಥೋರೊ, ಹೆನ್ರಿ ಡೇವಿಡ್
	1817-1862. ಅಮೆರಿಕದ ಶ್ರೇಷ್ಠ ಗದ್ಯಲೇಖಕ, ಕವಿ. ನಿಸರ್ಗವಾದಿ, ಎಮರ್ಸನ್ನನ ಅತೀತಾನುಭವ ತತ್ತ್ವದ (ಟ್ರ್ಯಾನ್ ಸೆಂಡೆಂಟಲಿಸಂ) ಅನುಯಾಯಿ. ಪ್ರಾಚೀನ ಗ್ರೀಕ್ ಮತ್ತು ಲ್ಯಾಟಿನ್ ಶಾಸ್ತ್ರವಿಷಯಗಳಲ್ಲಿ ವಿದ್ವಾಂಸ. ಜಾನ್ ಮತ್ತು ಸಿಂತಿಯಾ ಥೋರೊ ದಂಪತಿಗಳ ಎರಡನೆಯ ಮಗನಾಗಿ ಮ್ಯಾಸಚೂಸೆಟ್ಸಿನ ಕಾನ್‍ಕಾರ್ಡ್ ಎಂಬ ಊರಿನಲ್ಲಿ ಹುಟ್ಟಿದ. ಎಮರ್ಸನ್, ಹಾತಾರ್ನ್ ಮುಂತಾದವರು ಮಾಡಿಕೊಂಡಿದ್ದ ಕಾನ್‍ಕಾರ್ಡ್ ಗೆಳೆಯರ ಗುಂಪಿನಲ್ಲಿ ನಿಜವಾಗಿ ಕಾನ್‍ಕಾರ್ಡಿನಲ್ಲಿ ಹುಟ್ಟಿದವನು ಥೋರೊ ಒಬ್ಬನೇ. 1837 ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದ ಪದವೀಧರನಾದ. ಆಗ ಇವರ ಕುಟುಂಬ ಬಹಳ ಆರ್ಥಿಕ ತೊಂದರೆಯಲ್ಲಿತ್ತು. ಥೋರೊ ಕೆಲ ಕಾಲ ಕಾನ್‍ಕಾರ್ಡ್‍ನಲ್ಲೇ ಉಪಾಧ್ಯಾಯನಾಗಿ ಕೆಲಸ ಮಾಡುತ್ತಿದ್ದು ಅನಂತರ ಅದನ್ನು ಬಿಟ್ಟು ತಂದೆ ಕೈಕೊಂಡಿದ್ದ ಸೀಸದ ಪೆನ್ಸಿಲ್ ಮಾಡುವ ಸಣ್ಣ ಕೈಗಾರಿಕೆಯ ಉದ್ಯಮದಲ್ಲಿ ಸಹಾಯಕನಾದ. 			
(ಎನ್.ಎಸ್.ಎಲ್.)

	ತನ್ನ ಜೀವನದ ಧ್ಯೇಯ ಮತ್ತು ರೀತಿಗಳನ್ನು ಬಹು ಬೇಗ ನಿರ್ಧರಿಸಿಕೊಂಡ ಥೋರೊ ಉಪಜೀವನಕ್ಕಾಗಿ ಯಾವೊಂದು ನಿರ್ದಿಷ್ಟ ವೃತ್ತಿಯನ್ನೂ ಅವಲಂಬಿಸದೆ, ತನ್ನ ಅಗತ್ಯಕ್ಕೆ ಎಷ್ಟು ಬೇಕೊ ಅಷ್ಟು ಹಣವನ್ನು ಮಾತ್ರ ಯಾವುದಾದರೂ ದೇಹಪರಿಶ್ರಮದ ದೈನಂದಿನ ದುಡಿಮೆಯಿಂದ ಸಂಪಾದಿಸುತ್ತ, ಹೆಚ್ಚು ಕಾಲವನ್ನು ಓದುವುದರಲ್ಲಿಯೋ ನಿಸರ್ಗದ ವೈಚಿತ್ರ್ಯಗಳನ್ನು ವ್ಯಾಸಂಗ ಮಾಡಲೆಂದು ಕಾಡುಮೇಡು ಅಲೆಯುವುದರಲ್ಲೋ ವಿನಿಯೋಗಿಸತೊಡಗಿದ. ಕ್ರಮೇಣ ಅನುಭಾವಿಯಾದ. ಕ್ರಾಂತದರ್ಶಿಯಾದ, ಪ್ರಕೃತಿಯ ಉಪಾಸಕನಾದ. ಇನ್ನೂ 24 ವರ್ಷದವನಿದ್ದಾಗಲೇ ಈತನಿಗೆ ದಾರ್ಶನಿಕ ಎಮರ್ಸನ್ನನ ಪರಿಚಯವಾಯಿತು. ಸಹಜವಾಗಿ ಅವನ ತತ್ತ್ವಗಳ ಗಾಢ ಪ್ರಭಾವಕ್ಕೆ ಒಳಗಾದ. 1845 ರಲ್ಲಿ ವಾಲ್ಡನ್ ಪಾಂಡ್ ಎಂಬ ಪ್ರಶಾಂತವಾದ ವನಾಂತರದಲ್ಲಿ ಒಂದು ಪರ್ಣಕುಟೀರವನ್ನು ಕಟ್ಟಿಕೊಂಡು ಏಕಾಂಗಿಯಾಗಿ ತಪಸ್ವಿಯಂತೆ ಬಹು ಸರಳ ಜೀವನ ನಡೆಸತೊಡಗಿದೆ. ಬೇಸಾಯ, ತೋಟದ ಕೆಲಸ, ಬೇಲಿ ಕಟ್ಟುವುದು, ದೋಣಿಗಳನ್ನು ಮಾಡುವುದು, ಜಮೀನು ಅಳೆದುಕೊಡುವ ಮೋಜಣಿ ಕೆಲಸ ಮುಂತಾಗಿ ಆಯಾ ದಿನ ಯಾವುದು ಮನಸ್ಸಿಗೆ ಬಂದರೆ ಆ ಕೆಲಸವನ್ನು ಮಾಡಿ ಆವತ್ತಿನ ಸಂಪಾದನೆ ಮಾಡುವುದು ಇವನ ಪದ್ಧತಿಯಾಯಿತು. ತನ್ನ ಅತ್ಯಗತ್ಯ ಅವಶ್ಯಕತೆಗೆ ಬೇಕಾದುದಕ್ಕಿಂತ ಹೆಚ್ಚು ಸಂಪಾದಿಸಲು ಹೋಗುತ್ತಿರಲಿಲ್ಲ. ಆದಷ್ಟು ನಿಸರ್ಗಸಹಜವಾಗಿ ಸರಳವಾದ ಜೀವನನಡೆಸಬೇಕೆಂಬುದೇ ಧ್ಯೇಯವಾಗಿದ್ದುದರಿಂದ ಇವನ ಅಗತ್ಯಗಳೂ ತುಂಬ ಕಡಿಮೆಯಾಗಿದ್ದವು. ದೇಹಶ್ರಮದಿಂದ ಸಂಪಾದಿಸಬೇಕು ಎಂಬುದು ನಿಯಮ. ಜನ ಇವನನ್ನು ವಾಲ್ಡನ್ನಿನ ತಪಸ್ವಿ ಎಂದು ಕರೆದರು. ಬರೆವಣಿಗೆ ಇವನ ಮುಖ್ಯ ಹವ್ಯಾಸ ಆಯಿತು. ಜನರೊಂದಿಗೆ ಅಷ್ಟಾಗಿ ಬೆರೆಯುತ್ತಿರಲಿಲ್ಲ. ಜನರೂ ಇವನ ಬಳಿಗೆ ಹೆದರುತ್ತಿದ್ದರು. ಥೋರೊ ಬಹು ಸಿಡುಕ. ಕೆದರಿದ ತಲೆಗೂದಲು, ಕುರುಚಲು ಗಡ್ಡ, ದೊಣ್ಣೆ ಮೂಗು, ತೀಕ್ಷ್ಣವಾದ ಊದಾವರ್ಣದ ಕಣ್ಣು ಇವುಗಳಿಂದಾಗಿ ಶುದ್ಧ ಕಾಡುಮನುಷ್ಯನ ಲಕ್ಷಣಗಳೇ ಇವನಲ್ಲಿದ್ದವು. ಆದರೆ ಮಕ್ಕಳಿಗೆ ಮಾತ್ರ ಇವನನ್ನು ಕಂಡರೆ ಅದೇನೊ ಆಕರ್ಷಣೆ. ಇವನಿಗೂ ಅವರ ಮೇಲೆ ತುಂಬ ಮಮತೆ. ಮಕ್ಕಳೊಂದಿಗೆ ತಾನೂ ಮಗುವಾಗಿ ಇದ್ದುಬಿಡುತ್ತಿದ್ದ. 

	ವಾಲ್ಡನ್ ಪಾಂಡ್‍ನ ಏಕಾಂತವಾಸದಲ್ಲೇ ತಾನು ಮಾಡಿದ (1839) ಪ್ರವಾಸದ ಅನುಭವಗಳನ್ನು ಅ ವೀಕ್ ಆನ್ ದಿ ಕಾನ್‍ಕಾರ್ಡ್ ಅಂಡ್ ಮೆರಿಮ್ಯಾಕ್ ರಿವರ್ಸ್ ಎಂಬ ಪುಸ್ತಕದಲ್ಲಿ ಥೋರೊ ನಿರೂಪಿಸಿದ್ದಾನೆ. ಇದಲ್ಲದೆ ಕಾರ್ಲೈಲ್‍ನನ್ನು ಕುರಿತು ಒಂದು ಪ್ರಬಂಧವನ್ನೂ ವಾಲ್ಡನ್ ಅಥವಾ ಲೈಫ್ ಇನ್ ದಿ ವುಡ್ಸ್ ಎಂಬ ಅತ್ಯಂತ ಜನಪ್ರಿಯವಾದ ಪುಸ್ತಕವನ್ನೂ ಥೋರೊ ಬರೆದ. ವೀಕ್ 1849ರಲ್ಲೂ ವಾಲ್ಡನ್ 1854 ರಲ್ಲೂ ಪ್ರಕಟವಾದವು. ವೀಕ್ ಮುಂದೆ ತುಂಬ ಸುಪ್ರಸಿದ್ಧವಾದ ಪುಸ್ತಕವಾಯಿತಾದರೂ ಪ್ರಕಟವಾದಾಗ ಖರ್ಚಾದುದು ಕೇವಲ 200 ಪ್ರತಿಗಳು. 

	ಈ ನಡುವೆ ಥೋರೊ ಒಂದು ವರ್ಷಕಾಲ (1847) ಎಮರ್ಸನ್ನನ ಮನೆಯಲ್ಲೇ ಅವನ ವಹಿವಾಟುಗಳನ್ನು ನೋಡಿಕೊಳ್ಳುತ್ತ, ಅವನ ತತ್ತ್ವಪ್ರತಿಪಾದಕ ಪತ್ರಿಕೆಯಾದ ದಿ ಡಯಲ್‍ನ ಸಂಪಾದಕೀಯ ಕಾರ್ಯದಲ್ಲಿ ನೆರವಾಗುತ್ತ ಇರಬೇಕಾಗಿಬಂತು. ಆಗ ಅತೀತಾನುಭವತತ್ತ್ವವಾದಿಗಳಾಗಿದ್ದ ಬ್ರಾನ್ಸನ್ ಅಲ್ಕಾಟ್, ಜಾರ್ಜ್ ರೆವ್ಲೆ ಮತ್ತು ಮಾರ್ಗರೇಟ್ ಫುಲ್ಲರ್ ಇವರ ನಿಕಟ ಸಂಪರ್ಕವುಂಟಾಯಿತು. 

	1846ರಲ್ಲಿ ಅನಂತರ 1853 ಮತ್ತು 1857ರಲ್ಲಿ ಹೀಗೆ ಮೂರು ಸಲ ಮೇಯ್ನ್ ವುಡ್ಸ್ ನಲ್ಲಿ ಸಂಚಾರ ಮಾಡಿ ಬಂದು ಥೋರೊ ತನ್ನ ಅವಲೋಕನಗಳನ್ನೂ ಅನುಭವಗಳನ್ನು ಸವಿವರವಾಗಿ ಬರೆದಿಟ್ಟ. ಇದು ಥೋರೊನ ಮರಣಾನಂತರ 1864 ರಲ್ಲಿ ಪ್ರಕಟವಾಯಿತು. 1850ರಲ್ಲಿ ಮಾಡಿದ ಕೆನಡಾಪ್ರವಾಸದ ಫಲ ಎ ಯಾಂಕಿ ಇನ್ ಕೆನಡಾ(1866) ಎಂಬ ಕೃತಿ. 

	ಥೋರೊ 1835ರಿಂದಲೇ ತನ್ನ ದಿನಚರಿ ಬರೆದಿಡಲು ಆರಂಬಿಸಿದ. ತನ್ನ ಸಂಚಾರ, ಪ್ರವಾಸಗಳ ಕಾಲದಲ್ಲಿ ಕಂಡದ್ದು, ಅನಿಸಿದ್ದು, ಅನುಭವಕ್ಕೆ ಬಂದದ್ದು ಮತ್ತು ಚಿಂತಿಸಿದ್ದು ಎಲ್ಲವನ್ನೂ ಸವಿಸ್ತಾರವಾಗಿ ಬರೆದಿಟ್ಟ. ಅವೆಲ್ಲ ಒಟ್ಟು 30 ಸಂಪುಟಗಳಾಗುತ್ತವೆ. ಇವುಗಳಿಂದ ತೆಗೆದ ಕೃತಿಗಳೇ ಅರ್ಲಿ ಸ್ಪ್ರಿಂಗ್ ಇನ್ ಮ್ಯಾಸಚ್ಯೂಸೆಟ್ಸ್ (1881) , ಸಮರ್ (1884), ವಿಂಟರ್ (1887) ಎಂಬ ಪುಸ್ತಕಗಳು. ಥೋರೊ ಬದುಕಿದ್ದಾಗ ಪ್ರಕಟವಾದುದು ಎರಡೇ ಕೃತಿಗಳು. ಈತನ ಮರಣಾನಂತರ ಎಲ್ಲ ಇವನ ಬರೆಹಗಳನ್ನೂ ಕಲೆಹಾಕಿ, ವಿಂಗಡಿಸಿ ಹಲವಾರು ಗ್ರಂಥಗಳನ್ನಾಗಿ ಪ್ರಕಟಿಸಿದವರು ಎಮರ್ಸನ್ ಮುಂತಾದ ಮಿತ್ರರು. ಎಕ್ಸ್‍ಕರ್ಷನ್ಸ್ ಇನ್ ಫೀಲ್ಡ್ ಅಂಡ್ ಫಾರೆಸ್ಟ್ (1863) ಎಂಬ ಗ್ರಂಥದ ಮುನ್ನುಡಿಯಲ್ಲಿ ಎಮರ್ಸನ್ ಹಲವಾರು ನೆನಪುಗಳನ್ನು ವಿಶದವಾಗಿ ಬರೆದಿದ್ದಾನೆ. ಕೇಪ್ ಜಾಡ್ ಮತ್ತು ಎಮರ್ಸನ್ ಸಂಪಾದಿತ ಲೆಟರ್ಸ್ ಟು ವೇರಿಯಸ್ ಪರ್ಸನ್ಸ್ ವಿತ್ ನೈನ್ ಪೊಯೆಮ್ಸ್ 1865ರಲ್ಲೂ ಆಟಮ್ ಮತ್ತು ಎಫ್, ಬಿ. ಸ್ಯಾನ್‍ಬಾರ್ನ್ ಸಂಪಾದಿತ ಫೆಮಿಲಿಯರ್ ಲೆಟರ್ಸ್ ಆಫ್ ಎಚ್. ಡಿ. ಟಿ. 1894 ರಲ್ಲೂ ಪೊಯೆಮ್ಸ್ ಅಫ್ ನೇಚರ್ 1896ರಲ್ಲೂ ಪ್ರಕಟವಾದ ಕೃತಿಗಳು.

	1853 ರಲ್ಲಿ ಬಾಸ್ಟನ್ ಪ್ರಕಟವಾದ ದಿ ರಿವರ್‍ಸೈಡ್ ಎಂಬ ಹೆಸರಿನ ಹತ್ತು ಸಂಪುಟಗಳು ಥೋರೊನ ಬರೆಹಗಳ ಅತ್ಯುತ್ಕøಷ್ಟವಾದ ಸಂಕಲನ ಎನ್ನಬಹುದು.

	ಕ್ಷಯರೋಗ ಥೋರೊನ ಮನೆತನಕ್ಕೆ ಅಂಟಿ ಬಂದ ಶಾಪ. ತಂದೆ ಕ್ಷಯದಿಂದ ಸತ್ತಿದ್ದ. ಥೋರೊ ಸಹ ಬಹುಕಾಲದಿಂದ ಕ್ಷಯಕ್ಕೆ ಒಳಗಾಗಿದ್ದು ತನ್ನ 45 ನೆಯ ಹುಟ್ಟುಹಬ್ಬಕ್ಕೆ ಮುಂಚೆಯೇ ಕಾನ್‍ಕಾರ್ಡ್‍ನಲ್ಲಿ ತೀರಿಹೋದ. ಜಗತ್ತೆಲ್ಲ ಏಕ ರಾಜ್ಯವಾಗಬೇಕೆಂದು ಕನಸು ಕಾಣುತ್ತಿದ್ದ ಥೋರೊ ಮರಣಕಾಲದಲ್ಲಿ ಅದನ್ನು ಕುರಿತೇ ಮಾತನಾಡುತ್ತಿದ್ದನಂತೆ. 

	ಸರಳ ಜೀವನ, ಉನ್ನತ ಚಿಂತನೆ - ಇವೆರಡು ಥೋರೊ ಅನುಷ್ಠಾನಕ್ಕೆ ತಂದ ಬದುಕಿನ ಮಂತ್ರ. ಲೌಕಿಕ ತಿಳಿಯದ ಆದರ್ಶವಾದಿ, ಆಚರಿಸಲಸಾಧ್ಯವಾz ತತ್ತ್ವಗಳನ್ನು ಹೇಳಿದ ಸುಧಾರಕ ಎಂದು ಕರೆದು ಸಮಕಾಲೀನರು ಈತನ ಬಗ್ಗೆ ಪರಮ ಔದಾಸೀನ್ಯ ತಾಳಿದರು. ಅರ್ಧಶತಮಾನ ಮುಂಚಿತವಾಗಿ ಹುಟ್ಟಿ ಥೋರೊ ಅವಜ್ಞೆಗೆ ಗುರಿಯಾದ. 20 ನೆಯ ಶತಮಾನದಲ್ಲಿ ಈತನೊಬ್ಬ ಮೂಲ ಚಿಂತನಶೀಲ , ಧೀರ ಸ್ವತಂತ್ರ್ಯ ವಿಚಾರವಂತ, ಹೊಸ ಯುಗದ ಜೀವನತತ್ತ್ವಗಳ ಪ್ರವರ್ತಕ ಎಂದು ಲೋಕ ಗುರುತಿಸಿ ಮನ್ನಣೆಯಿತ್ತಿತು. 

	ಥೋರೊ ಎಲ್ಲ ತಲೆಪಟ್ಟಿಗಳನ್ನೂ ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸಿದ್ದ. ಈತನ ಬರೆಹಗಳು. ತತ್‍ಕ್ಷಣದ ವರ್ತಮಾನದ ಬದುಕಿಗೆ ನೇರವಾಗಿ ಸಂಬಂಧಿಸುತ್ತವೆ ಮತ್ತು ಅವುಗಳಲ್ಲಿ ವ್ಯಕ್ತಿ ವೈಶಿಷ್ಟ್ಯವಿದೆ. ಥೋರೊ ಅಮೆರಿಕದ ಅತಿ ಶ್ರೇಷ್ಠ ಗದ್ಯಶಿಲ್ಪಿಗಳಲ್ಲಿ ಒಬ್ಬ. ಈತನ ಶೈಲಿ ವೀರ್ಯವತ್ತಾದುದು. ನೇರವಾದುದು. ಸರಳವಾದುದು. ಅದರ ಬಂಧದಲ್ಲಿ ಬಿಗಿಯಿದೆ, ಭದ್ರವಾದ ಲಯ ಇದೆ. ಬುದ್ಧಿಯ ಚುರುಕಿದೆ. ಅಲ್ಲಲ್ಲಿ ಹೊಸ ಅರ್ಥವನ್ನು ಸ್ಪುರಿಸುವ ಸೊಗಸಾದ ನುಡಿಗುಟ್ಟಗಳು, ಕಾವ್ಯಮಯವಾಗಿ ಹರಿಯುವ ಭಾಗಗಳು ಚಿತ್ತವನ್ನಾಕರ್ಷಿಸುತ್ತವೆ. ಒಟ್ಟಿನಲ್ಲಿ ಥೋರೊನ ಸಚ್ಚಾರಿತ್ರ್ಯ ಬರೆಹಗಳಲ್ಲೂ ತೊಳಗಿ ಬೆಳಗುತ್ತದೆ. 

	ಈತನ ಪದ್ಯಗಳು ಮಾತ್ರ ಬರಿಯ ಅಬ್ಬರದ ವಿದ್ವತ್ಪೂರ್ಣ ಯಾಂತ್ರಿಕ ರಚನೆಗಳಿಂದ ಹಾಳಾಗಿವೆ. ಅಲ್ಲೊಂದು ಇಲ್ಲೊಂದು ಚಕಿತಗೊಳಿಸುವ ಸುಂದರವಾದ ಸಾಲು ಕಾಣಿಸಬಹುದು. 1939ರಲ್ಲಿ ಥೋರೊನ ಜೀವನಚರಿತ್ರೆಯನ್ನು ಬರೆದ ಹೆನ್ರಿಸೀಡೆಲ್ ಕ್ಯಾನ್‍ಬಿ, ಅವನ ಶೈಲಿಯಲ್ಲಿ ಮೂರು ಬಗೆಗಳನ್ನು ಗುರುತಿಸಿ ಹೆಸರಿಸಿದ್ದಾನೆ. 1 ಕ್ರಾಂತ ದರ್ಶನ ಶೈಲಿ 2 ಆನಂದಾತಿಶಯದ ಶೈಲಿ 3 ಹಾಸ್ಯವ್ಯಂಜಿತ ಚಿಂತನ ಶೈಲಿ. ಮಾತಿನ ಸ್ಪರ್ಶಕ್ಕೆ ಕರಗಿಹೋಗುವ ಅತ್ಯಂತ ನವುರಾದ ಭಾವನೆ. ಅನಿಸಿಕೆಗಳಿಗೆ ಸ್ಪಷ್ಟವಾದ ಮತ್ತು ಸ್ಥಿರವಾದ ರೂಪವನ್ನು ಕೊಡಬಲ್ಲ ಅಸಾಧರಣ ಅಭಿವ್ಯಕ್ತಿ ಸಾಮಥ್ರ್ಯವನ್ನು ಥೋರೊ ತನ್ನ ಬರೆಹಗಳಲ್ಲಿ ತೋರಿಸಿದ್ದಾನೆ. 

	ಅಮೆರಿಕದ ರೂಢಮೂಲವಾಗಿದ್ದ ಗುಲಾಮಪದ್ಧತಿಯನ್ನು ಏಕಾಂಗಿಯಾಗಿ ನಿರ್ಭಯವಾಗಿ ಥೋರೋ ಖಂಡಿಸಿದ. ಜನತೆಗೆ ನ್ಯಾಯವನ್ನು ದೊರಕಿಸಿಕೊಡದಂಥ, ಬದಲು ಅನ್ಯಾಯವನ್ನೇ ಮಾಡುವಂಥ ಕಾನೂನು ಸಂವಿಧಾನಾತ್ಮಕವಾಗಿಯೇ ರಚಿತವಾಗಿದ್ದರೂ ಅದನ್ನು ಭಂಗ ಮಾಡುವುದೇ ಸತ್ಯನಿಷ್ಠೆ, ಪ್ರಜೆಯ ಕರ್ತವ್ಯ ಎಂದು ಘೋಷಿಸಿದ. ಅದರಂತೆ ಅನ್ಯಾಯವೆಂದು ಕಂಡುಬಂದ ತೆರಿಗೆಯನ್ನು ಕೊಡಲು ನಿರಾಕರಿಸಿ ಕಾಯಿದೆ ಭಂಗ ಮಾಡಿದ ಅಪರಾಧಕ್ಕಾಗಿ ಕೆಲವು ದಿನ ಸೆರೆಮನೆ ವಾಸವನ್ನೂ ಮಾಡಿದ. ಥೋರೊ ತನ್ನ ಇಷ್ಟ ಬಂದಂತೆಯೆ ಮಾಡುವ ಹಠವಾದಿಯಾಗಿದ್ದ. ಆದರೆ ಸತ್ಯ, ಧರ್ಮ ನ್ಯಾಯ ದೃಷ್ಟಿಗಳಿಂದ ಕೂಡಿದ ಅಂತರಂಗದ ವಿವೇಕವಾಣಿ ಇವನ ಇಷ್ಟವನ್ನು ನಿರ್ಧರಿಸುತ್ತಿತ್ತು. ಮುಂದೆ 20 ನೆಯ ಶತಮಾನದಲ್ಲಿ ಕಾಯಿದೆಭಂಗ - ಕರನಿರಾಕರಣ ಚಳವಳಿಗಳನ್ನು ಹೂಡಿದ ಗಾಂಧೀಜಿಯ ವಿಚಾರಧಾರೆಯ ಮೇಲೂ ಅವರ ಸತ್ಯಾಗ್ರಹ ವಿಧಾನದ ಕಲ್ಪನೆಯ ಮೇಲೂ ಥೋರೊನ ಈ ಹೊಸ ವಿಚಾರಗಳು ಪ್ರಭಾವ ಬೀರಿದವು., ಥೋರೊನ ಸರಳಜೀವನದ ರೀತಿ, ಆರ್ಥಿಕ ನೀತಿ ಗಾಂಧೀಜಿ ಪ್ರಯೋಗ ಮಾಡಿದ ಆಶ್ರಮಜೀವನದ ಮುನ್ಸೂಚನೆಯಾದವು. 					
	 (ಕೆ.ಬಿ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ